Tuesday, October 20, 2015

ಬಸವಣ್ಣನವರ ದೃಷ್ಟಿಯಲ್ಲಿ ರುದ್ರಾಕ್ಷಿ ಮಹಿಮೆ


ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ,
ಶ್ರೀ ರುದ್ರಾಕ್ಷಿಯ ಧರಿಸದ ಅಧಮರ ಭವಿಯಂಬೆ,
ಕೂಡಲಸಂಗಮದೇವಯ್ಯಾ,
ಶ್ರೀ ರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ ||

ಅವರು ಯಾವುದೇ ಜಾತಿ, ಮತ, ಪಂಥದವರಾಗಿರಲಿ, ಹೆಣ್ಣಿರಲಿ, ಗಂಡಿರಲಿ, ಬಡವರಿರಲಿ, ಸಿರಿವಂತರಿರಲಿ, ವಯಸ್ಕರಿರಲಿ, ಅವಯಸ್ಕರಿರಲಿ, ಅಂಗವಿಕಲಲಿರಲಿ, ಮತಿವಿಕಲಲಿರಲಿ, ಅದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಲಾಗದೆ, ಯಾವನು ದೇಹದ ಮೇಲೆ ರುದ್ರಾಕ್ಷಿ ಧಾರಣೆ ಮಾಡುವನೋ ಅವನೇ ನನ್ನ ದೇವರು ಕೂಡಲಸಂಗಮದೇವಾ ಎನ್ನುತ್ತಾ, ಶ್ರೀ ರುದ್ರಾಕ್ಷಿಯ ಧರಿಸದವರು ಹೀನರು, ಅಧಮರು, ನೀಚರು ಎಂದು ಬಸವಣ್ಣನವರು ಹೇಳುತ್ತಾ, ಹಾಗೆಯೇ ಮುಂದುವರೆಸುತ್ತಾ,

ಹಸ್ತ ಕಡಗ ಕೈಗಧಿಕ ನೋಡಾ, ಕೊಡಲಹುದು, ಕೊಳ್ಳಲಹುದು,
ಬಾಹುಬಳೆ ಧೂಳಿಂದಧಿಕ ನೋಡಾ, ಪರವಧುವನಪ್ಪಲಾಗದ,
ಕರ್ಣಕ್ಕೆ ರುದ್ರಾಕ್ಷಿ ಅಧಿಕ ನೋಡಾ, ಶಿವನಿಂದೆಯ ಕೇಳಲಾಗದು,
ಕಂಠಮಾಲೆ ಕೊರಳಿಂದಧಿಕ ನೋಡಾ, ಅನ್ಯ ದೈವಕ್ಕೆ ತಲೆಬಾಗಲಾಗದು,
ಆವಾಗಳೂ ನಿಮ್ಮವನೇ ನೆನೆದು, ನಿಮ್ಮವನೇ ಪೂಜಿಸಿ, ಕೂಡಲಸಂಗಯ್ಯನ,
ಪದಸನ್ನಿಹಿತನಾಗಿಪ್ಪದೆ ಲಿಂಗ ಶಿಖಾಮಣಿಯಯ್ಯಾ ||

ಹಾಗೆಂದು ಶ್ರೀ ರುದ್ರಾಕ್ಷಿ ಧರಿಸುವವರನ್ನು ಬಸವಣ್ಣನವರು, ಅಂದಚೆಂದಕ್ಕಾಗಲಿ, ಶೃಂಗಾರವೆಂದಾಗಲಿ ಧರಿಸಲು ನಿಷೇಧ ಮಾಡಿ, ಮುಂಗಟ್ಟಿಗೆ ರುದ್ರಾಕ್ಷಿ ಧರಿಸಿದವ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ ಮಾಡಲಾರ, ಕಳ್ಳತನ ಮಾಡಲಾರ, ಯಾರೊಬ್ಬರ ಸ್ವತ್ತು ಕಸಿಯಲಾರ, ಯಾರನ್ನೂ ಹಿಂಸಿಸಲಾರ. ತೋಳಬಂದಿಯಾಗಿ ರುದ್ರಾಕ್ಷಿ ಧರಿಸಿದಾತ ಪರಸ್ತ್ರೀಯನ್ನು ಬಯಸಲಾರ.

ಕಿವಿಯೋಲೆಯಂತೆ ರುದ್ರಾಕ್ಷಿ ಧರಿಸಿದ ಮೇಲೆ ಶಿವನಿಂದನೆ ಕೇಳಲಾಗದು. ಅಸತ್ಯವನ್ನು ಮತ್ತು ಕರ್ಣಕಠೋರ ಸಾಹಿತ್ಯವನ್ನು ಕೇಳಲಾಗದು. ಅಂತಹವರ ಸಹವಾಸದಿಂದ ದೂರ ಇರಬೇಕಾಗುವುದು. ಅಂತೆಯೇ ಕೊರಳಿಗೆ ರುದ್ರಾಕ್ಷಿ ಸರ ಕಾಕಿಕೊಂಡವರು ಕೂಡಲಸಂಗಮನಾಥನೊಬ್ಬನನ್ನು ಬಿಟ್ಟು ಉಳಿದ ದೇವರಿಗೆ ತಲೆಬಾಗಲಾಗದು. ಕಾಯಾ-ವಾಚಾ-ಮನಸಾ ಕೂಡಲಸಂಗಮನನ್ನೇ ನಂಬಿ ಶಿವಲಿಂಗದ ಸನ್ನಿಧಿ, ಜಂಗಮದ ಸಹವಾಸದಿಂದ ದೇಹವೇ ದಿವ್ಯ ದೇಗುಲವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಅಂಗದ ಮೇಲೆ ರುದ್ರಾಕ್ಷಿ ಧರಿಸಿದ ಮೇಲೆ, ಪರುಶಮಣಿ ಮುಟ್ಟಿದ ಕಬ್ಬಿಣದಂತೆ, ಅವನು ಕಳಂಕರಹಿತನಾಗುವನು. ಪರಿಶುದ್ಧವಾಗುವುದು ಈ ಮೈ-ಮನ. ಅಂತಹ ರುದ್ರಾಕ್ಷಿ ಧರಿಸಿದವ ಬೇರಾರೂ ಅಲ್ಲ, ಅದು ನೀನೇ, ಜೀವಂತ ದೇವರು ಕೂಡಲಸಂಗಮನಾಥ ಎಂದು ದೇವರನ್ನು ನಂಬಿದ್ದಾನೆ.

ಅಯ್ಯಾ, ನನಗೆ ರುದ್ರಾಕ್ಷಿಯೇ ಸರ್ವಪಾವನ,
ಅಯ್ಯಾ, ಎನಗೆ ರುದ್ರಾಕ್ಷಿಯೇ ಸರ್ವಸಿದ್ಧಿ,
ಅಯ್ಯಾ, ನಿಮ್ಮ ಪಂಚ ವಸ್ತುಗಳೇ ಪಂಚಮುಖದ ರುದ್ರಾಕ್ಷಿಗಳಾದುವಾಗಿ,
ಅಯ್ಯಾ, ಕೂಡಲಸಂಗಮದೇವಾ,
ಎನ್ನ ಮುಕ್ತಿ ಪಥಕ್ಕೆ, ಈ ರುದ್ರಾಕ್ಷಿ ಸಾಧನವಯ್ಯಾ ||

ಪಟ್ಟಕವನ್ನು ಕದಡು ನೀರಿನಲ್ಲಿ ಹಾಕಿದಾಗ, ನೀರು ತಿಳಿಯಾಗುವಂತೆ, ರುದ್ರಾಕ್ಷಿ ಧಾರಣೆಯಿಂದ ನನ್ನ ಮೈ-ಮನಗಳು ಪವಿತ್ರವಾದವು. ನಿನ್ನನ್ನು ಒಲಿಸಿಕೊಳ್ಳುವ ವಶೀಕರಣದ ಮಂತ್ರದಂಡದಂತೆ, ಸರ್ವಸಿದ್ಧಿಗಾಗಿ, ಈ ರುದ್ರಾಕ್ಷಿ ಎಂಬುದನ್ನು ಮನಗಂಡೆ. ಪರಶಿವನ ಪಂಚವಸ್ತ್ರಗಳಾದ – ಜಡೆಯಲ್ಲಿ ಗಂಗೆ, ಶಿರದಲ್ಲಿ ಚಂದ್ರ, ಕೈಯಲ್ಲಿ ತ್ರಿಶೂಲ ಮತ್ತು ಡಮರು, ಕೊರಳಲ್ಲಿ ನಾಗ ಇವುಗಳ ದ್ಯೋತಕವೇ ಪಂಚಮುಖದ ರುದ್ರಾಕ್ಷಿ ಎಂಬುದು ನನಗೆ ತಿಳಿಯಿತು. ರುದ್ರಾಕ್ಷಿ ಧರಿಸಿದ ಎನಗೆ, ತತ್ವಮಸಿ – ನಾನು ಅವನೇ, ಎಂಬುದರ ಅನುಭವಾಯಿತು. ಮುಕ್ತಿ ಪಥಕ್ಕೆ ಈ ರುದ್ರಾಕ್ಷಿ ಎಂಬುದು ದಾರಿ ದೀವಿಗೆಯಾಯ್ತು ಎಂದು ಆನಂದಪರವಶರಾಗಿ ರುದ್ರಾಕ್ಷಿಯ ಮಹಿಮೆಯನ್ನು, ಅದನ್ನು ಧರಿಸಲು ಬೇಕಾಗುವ ತತ್ವಗಳನ್ನು, ರುದ್ರಾಕ್ಷಿ ಧಾರಣೆಯ ನಂತರದ ಆಚರಣೆಗಳನ್ನು ಮತ್ತು ಅದರ  ಸಾಮರ್ಥ್ಯವನ್ನು ಮನಗಂಡ ಬಸವಣ್ಣನವರು ತಮ್ಮ ಅನುಭವವನ್ನು ನಮ್ಮೆಲ್ಲರಿಗಾಗಿ ಬಿಚ್ಚಿಟ್ಟಿದ್ದಾರೆ.


@@@

ನಿತ್ಯ ಸತ್ಯ - ೫